ಮೀಡ್, ಮಾರ್ಗರೆಟ್
1901-78. ಪ್ರಸಿದ್ಧ ಮಾನವಶಾಸ್ತ್ರಜ್ಞೆ ಅಮೆರಿಕ ಸಂಯುಕ್ತ ಸಂಸ್ಥಾನಗಳ ಪೆನ್ಸಿಲ್ವೇನಿಯ ರಾಜ್ಯದ ಫಿಲಡೆಲ್ಪಿಯ ನಗರದಲ್ಲಿ 1901 ಡಿಸೆಂಬರ್ 16ರಂದು ಜನಿಸಿದರು ಪ್ರಾಥಮಿಕ ಶಿಕ್ಷಣದ ತರುವಾಯ ಬರ್ನಾರ್ಡ್ ಕಾಲೇಜಿನಿಂದ ಬಿ.ಎ. ಪದವಿಯನ್ನೂ (1923) ನ್ಯೂಯಾರ್ಕಿನ ಕೊಲಂಬಿಯ ವಿಶ್ವವಿದ್ಯಾಲಯದಿಂದ ಮನೋವಿಜ್ಞಾನದಲ್ಲಿ ಎಂ.ಎ. ಪದವಿಯನ್ನೂ (1927) ಪಡೆದರು. ಕಾಲೇಜಿನಲ್ಲಿ ವಿದ್ಯಾರ್ಥಿನಿಯಾಗಿದ್ದಾಗ ಸುಪ್ರಸಿದ್ಧ ಮಾನವಶಾಸ್ತ್ರಜ್ಞರಾದ ಫ್ರಾನ್ಜ್ ಬೋವಾಸ್ (1858-1942). ರೂತ್ ಬೆನಡಿಕ್ಟ್ (1887-1948) ಮುಂತಾದವರ ಉಪನ್ಯಾಸ ಮತ್ತು ಲೇಖನಗಳಿಂದ ಪ್ರಭಾವಿತರಾಗಿ ಆ ಶಾಸ್ತ್ರದಲ್ಲಿ ವಿಶೇಷ ಆಸಕ್ತಿ ಮತ್ತು ಸಂಶೋಧನಾ ಪ್ರವೃತ್ತಿ ಬೆಳೆಸಿಕೊಂಡರು. ಸಾಂಸ್ಕøತಿಕ ಮಾನವಶಾಸ್ತ್ರವನ್ನು ಮುಖ್ಯ ಅಧ್ಯಯನ ವಿಷಯವಾಗಿ ಆರಿಸಿಕೊಂಡು ಪಿಎಚ್.ಡಿ. ಪದವಿ ಪಡೆದರು (1929). ಸಂಶೋಧನಾ ವಿದ್ಯಾರ್ಥಿನಿಯಾಗಿದ್ದಾಗ ಆಕೆ ಪೆಸಿಫಿಕ್ ಸಾಗರದ ಸಮೋವಾ ದ್ವೀಪಗಳಲ್ಲಿ ವಾಸವಾಗಿರುವ ತರುಣರ ಜೀವನ ಕುರಿತು ಅಧ್ಯಯನ ನಡೆಸಿ (1928) ಪ್ರಕಟಿಸಿದ ಪುಸ್ತಕ ಇಂದಿಗೂ ಪ್ರಸಿದ್ಧವಾಗಿದೆ.

	ಶೈಕ್ಷಣಿಕ ಅರ್ಹತೆ ಪಡೆದ ತರುವಾಯ ನ್ಯೂಯಾಕಿನಲ್ಲಿರುವ ಅಮೆರಿಕೆಯ ಪ್ರಾಕೃತಿಕ ಇತಿಹಾಸ ವಸ್ತು ಸಂಗ್ರಹಾಲಯದಲ್ಲಿ (ಅಮೆರಿಕನ್ ಮ್ಯೂಸಿಯಮ್ ಆಫ್ ನ್ಯಾಚುರಲ್ ಹಿಸ್ಟರಿ) ಕ್ಷೇತ್ರಕಾರ್ಯ ನಿರ್ವಹಿಸುವ ಸಂಶೋಧಕಿಯಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದರು (1964). ಮೀದ್ ಅವರ ಸೇವೆ ವಸ್ತುಸಂಗ್ರಹಾಲಯಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಸಾಮಾಜಿಕ ಹಾಗೂ ಸಾಂಸ್ಕøತಿಕ ಮಾನವಶಾಸ್ತ್ರ ಬೋಧನೆಯಲ್ಲೂ ಪಾಲ್ಗೊಳ್ಳುತ್ತಿದ್ದರು. ಅಮೆರಿಕೆಯ ಅನೇಕ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶನ ಪ್ರಾಧ್ಯಾಪಿಕೆಯಾಗಿದ್ದರು. ಹಲವಾರು ಸಂಘ, ಸಂಸ್ಥೆ, ವಿದ್ವಾಂಸ ಮಂಡಳಿಗಳೊಡನೆ ನಿಕಟ ಸಂಪರ್ಕ ಇಟ್ಟು ಕೊಂಡಿದ್ದರು. ಅಮೆರಿಕನ್ ಸರ್ಕಾರದ ಅನೇಕ ಆಯೋಗಗಳಲ್ಲಿ ಕಾರ್ಯನಿರತರಾಗಿದ್ದರು.

	ಪ್ರಾಚೀನ ಬುಡಕಟ್ಟುಗಳ ಸಾಮಾಜಿಕ ಜೀವನ ಕುರಿತಂತೆ ವ್ಯಾಪಕ ಅಧ್ಯಯನ ನಡೆಸಿದರೂ ಆಧುನಿಕ ಸಮಾಜದ ಸಂಕೀರ್ಣ ಸಮಸ್ಯೆಗಳಿಂದ ದೂರವಾಗಿರಲಿಲ್ಲ. ಇದನ್ನು ಪರಿಹರಿಸುವ ದಿಕ್ಕಿನತ್ತ ಸರ್ಕಾರ ಅನುಸರಿಸಬೇಕಾದ ನಿರ್ದಿಷ್ಟ ಕ್ರಮದ ಬಗ್ಗೆ ಯುಕ್ತ ಸಲಹೆ ನೀಡಬಲ್ಲ ತಜ್ಞೆಯಾಗಿದ್ದರು. ಸಮೋವಾದ ಸರಳ ಸಮಾಜ ಕುರಿತು ಅಧ್ಯಯನ ನಡೆಸಿದ ಅನಂತರ ಆ ಅನುಭವದ ಅರಿವಿನಿಂದಲೇ ಆಧುನಿಕ ಸಮಾಜದ ಪ್ರಮುಖ ಸಮಸ್ಯೆಗಳ ಕಡೆಗೂ ಬೆಳಕು ಕಾಣಿಸಿದರು. ಸಂಕೀರ್ಣ ಸಮಾಜದಲ್ಲಿರುವ ವ್ಯಕ್ತಿಯ ಮಾನಸಿಕ ಪ್ರಕ್ರಿಯೆಗಳತ್ತ ವಿಶೇಷ ಗಮನ ಹರಿಸಿ ಅನೇಕ ಹೊಸ ವಿಚಾರಗಳನ್ನು ಹೊರಗೆಡಹಿದರು. ಬಾಲ್ಯ ಮತ್ತು ಯೌವನ ಸಾಂಸ್ಕøತಿಕ ನೆಲಗಟ್ಟು ಮತ್ತು ಲೈಂಗಿಕ ವರ್ತನೆ, ಮನೋವಿಜ್ಞಾನ ಮತ್ತು ಸಂಸ್ಕøತಿ. ರಾಷ್ಟ್ರೀಯ ಗುಣ ಮತ್ತು ಸಾಂಸ್ಕøತಿಕ ಪರಿವರ್ತನೆ ಮುಂತಾದ ವಿಷಯಗಳಲ್ಲಿ ಬಲು ಆಸಕ್ತಿ ವಹಿಸಿದ್ದರು. ವೈಜ್ಞಾನಿಕ ಕ್ಷೇತ್ರ ಇಂದು ವಿಸ್ತಾರ ಗೊಂಡಿದೆ; ಕೃಷಿ ಕೈಗಾರಿಕೆಗಳಲ್ಲಿ ಕ್ರಾಂತಿ ಉಂಟಾಗಿದೆ; ಜೀವನಮಟ್ಟ ಸುಧಾರಿಸಿದೆ. ಈ ಎಲ್ಲ ಬದಲಾವಣೆಗಳು ಎಲ್ಲ ರಾಷ್ಟ್ರಗಳಲ್ಲೂ ಒಂದೇ ರೀತಿಯಾಗಿಲ್ಲ. ವೈಜ್ಞಾನಿಕ, ತಾಂತ್ರಿಕ ಅಭಿವೃದ್ಧಿಯಿಂದಾಗಿ ಆಧುನಿಕ ಸಮಾಜದಲ್ಲಿ ಉದ್ಭವಿಸಿರುವ ಸಮಸ್ಯೆಗಳು ಯಾವುವು ? ಅವನ್ನು ಶೀಘ್ರವಾಗಿ ಪರಿಹರಿಸುವ ಮಾರ್ಗ ಯಾವುದು? ಇವೇ ಮುಂತಾದವು ಅವರ ಸಂಶೋಧನಾ ಸೀಮೆಗೆ ಒಳಪಟ್ಟ ವಿಷಯಗಳಾಗಿದ್ದುವು. ಅಲ್ಲದೆ `ತಲೆಮಾರುಗಳ ಅಂತರ ಅವರ ಅಧ್ಯಯನದ ಹೊಸ ಕ್ಷೇತ್ರವಾಗಿತ್ತು.

	ವಿಚಾರಪೂರ್ವಕ ಮತ್ತು ವಾದಗ್ರಸ್ತ ವಿಷಯಗಳನ್ನು ಮಂಡಿಸಿ ಚರ್ಚಿಸಲು ಮೀಡ್ ಹಿಂದಗೆಯುತ್ತಿರಲಿಲ್ಲ. ಇವರ ಕೆಲ ವಿಚಾರಗಳು ಚರ್ಚಾಸ್ಪದವಾಗಿದ್ದರೂ ಪ್ರಚೋದನೆಗೆ ಕಾರಣವಾಗಿದ್ದುವು. ವಿಚಾರ ಮಂಡನೆ ಮತ್ತು ವಿಷಯ ವಿಶ್ಲೇಷಣೆಯಲ್ಲಿ ಈಕೆ ನುರಿತೆ ವಿದುಷಿಯಾಗಿದ್ದರು. ಈಕೆಯದು ನೇರ ಮತ್ತು ಖಚಿತ ಬರೆವಣಿಗೆ. ಇದರಿಂದಾಗಿ ಅನೇಕರ ಆಗ್ರಹಕ್ಕೂ ಕಾರಣರಾಗಿದ್ದರು. ಗ್ರಾಮೀಣ ಜನ ನಗರಗಳಿಗೆ ವಲಸೆ ಹೋಗುವ ವಿಚಾರದ ಬಗ್ಗೆ ಈಕೆ ತಳೆದ ನಿಲುವು ಇದು: ಮಾನವಕೋಟೆಯಲ್ಲಿ ಕೊನೆ ಪಕ್ಷ ಶೇಕಡಾ ಐವತ್ತು ಜನ ತಮ್ಮ ಅತ್ತೆಯರ ಬಳಿ ವಾಸಿಸಲು ಇಚ್ಚಿಸುವುದಿಲ್ಲ. ಗ್ರಾಮೀಣರು ನಗರಕ್ಕೆ ಬಂದಾಗ ತಮ್ಮ ಸಂಬಂಧಿಗಳಿಂದ ದೂರವಿರುವ ಅವಕಾಶ ಒದಗುತ್ತದೆ.

	ಮಾನವಶಾಸ್ತ್ರ ಮತ್ತಿತರ ತತ್ಸಂಬಂಧಿ ಕ್ಷೇತ್ರಗಳಲ್ಲಿ ಮೀಡ್ ಅವರ ಸಂಶೋಧನಾ ದುಡಿಮೆ ಸುಮಾರು ಐವತ್ತು ವರ್ಷಗಳದ್ದು. ಈ ಅವಧಿಯಲ್ಲಿ ಅನೇಕ ಬುಡಕಟ್ಟು ಸಮಾಜಗಳ ಅಧ್ಯಯನ ನಡೆಸಿ ಹಲವಾರು ಸಂಪ್ರಬಂಧಗಳನ್ನೂ ಪುಸ್ತಕಗಳನ್ನೂ ಪ್ರಕಟಿಸಿದ್ದಾರೆ. ಅವುಗಳ ಪೈಕಿ ಮುಖ್ಯವಾದವು: ಕಮಿಂಗ್ ಆಫ್ ಏಜ್ ಇನ್ ಸಮೋವಾ (1949). ಮೇಲ್ ಅಂಡ್ ಫೀಮೇಲ್ (1956). ನ್ಯೂ ಲೈವ್ಸ್ ಫಾರ್ ಓಲ್ಡ್ (1956) ಮತ್ತು ಕಲ್ಚರ್ ಅಂಡ್ ಕಮಿಟ್‍ಮೆಂಟ್ (1970).

	ತಮ್ಮ ಉಪನ್ಯಾಸಗಳಿಂದಾಗಿ ಬರೆಹಗಳಿಂದಾಗಿ ಅಂತರರಾಷ್ಟ್ರೀಯ ಖ್ಯಾತಿಗಳಿಸಿದ್ದ ಮೀಡ್, ಭಾರತದ ಕಳಿಂಗ ಪ್ರಶಸ್ತಿಯನ್ನೂ (1971) ಒಳಗೊಂಡಂತೆ ಅನೇಕ ಬಹುಮಾನಗಳನ್ನೂ ಗೌರವ ಮನ್ನಣೆಗಳನ್ನೂ ಪಡೆದಿದ್ದರು. ಕಳಿಂಗ ಪ್ರಶಸ್ತಿಯನ್ನು ಪಡೆದ ಮೊದಲ ಮಹಿಳೆ ಈಕೆ.									
	(ಎ.ಸಿ.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ